ಮರಣದಂಡನೆ -
ಅಪರಾಧಿಗಳಿಗೆ ವಿಧಿಸುವ ಪರಮಾವಧಿ ಶಿಕ್ಷೆ (ಕ್ಯಾಪಿಟಲ್ ಪನಿಷ್‍ಮೆಂಟ್). ಪ್ರಾಚೀನ ಕಾಲದಲ್ಲಿ ಮರಣದಂಡನೆ ಸಾಮಾನ್ಯವಾಗಿದ್ದು ಪುರಾತನ ಮರಣದಂಡನೆಯನ್ನು ಶಿಕ್ಷೆಯೆಂದು ಎಣಿಸುತ್ತಿರಲಿಲ್ಲ. ಕುಟುಂಬವೇ ಸಮಾಜ ಘಟಕವಾಗಿದ್ದ ಆ ಕಾಲದಲ್ಲಿ ತಂದೆಯೇ ಮರಣದಂಡನೆಯನ್ನು ವಿಧಿಸಬಹುದಾಗಿತ್ತು. ಆ ಶಿಕ್ಷೆ ನಿಷಿದ್ಧ ಲೈಂಗಿಕ ಸಂಬಂಧ, ಹಾದರ ಹಾಗೂ ನಿಷೇದಾಜ್ಞೆಯ ಉಲ್ಲಂಘನೆಗಳಿಗೆ ಸೀಮಿತವಾಗಿತ್ತು. ಅಂಥ ಸಂದರ್ಭಗಳಲ್ಲಿ ಜೀವಹರಣವನ್ನು ಶಿಕ್ಷೆಯೆಂದು ಯಾರೂ ತಿಳಿಯುತ್ತಿರಲಿಲ್ಲ. ವ್ಯಕ್ತಿ ತನ್ನ ತಪ್ಪಿನಿಂದ ದೇವತೆಗಳ ಕೋಪಕ್ಕೆ ಗುರಿಯಾದವನೆಂದೂ ಅವನನ್ನು ಹಾಗೇ ಜೀವಂತ ಉಳಿಯಲು ಬಿಟ್ಟಲ್ಲಿ ಕುಟುಂಬವನ್ನೇ ದುರ್ದೆಶೆಗೆ ದೂಡುವನೆಂದೂ ಮರಣದಂಡನೆ ಆ ಪಾಪಿಯ ಅನಿವಾರ್ಯ ನಿರ್ಮೂಲನವೆಂದೂ ತಿಳಿಯುತ್ತಿದ್ದರು. ಮುಂದೆ ಅಪರಾಧಗಳನ್ನು ಸಾಮಾಜಿಕ ಮತ್ತು ವೈಯಕ್ತಿಕವೆಂದು ವಿಂಗಡಿಸಿದರು. ಮಾಟ, ನಿಷಿದ್ಧ ಲೈಂಗಿಕ ಸಂಬಂಧ ಮತ್ತು ರಾಜದ್ರೋಹ ಮೊದಲನೆಯ ವರ್ಗದಲ್ಲಿ ಸೇರುತ್ತಿದ್ದುವು. ಅಂಥ ಅಪರಾಧಿಗಳನ್ನು ಅಂಟುಜಾಡ್ಯ ಹರಡುವವರಂತೆ ಎಣಿಸಿ ಜೀವಂತ ಸುಟ್ಟು ಇಲ್ಲವೇ ನೀರಲ್ಲಿ ಮುಳುಗಿಸಿ ಸಾಯಿಸುತ್ತಿದ್ದರು. ಅದನ್ನು ಶಿಕ್ಷೆಯೆಂದೆಣಿಸದೆ ಸಮಾಜವನ್ನು ಶುದ್ಧಗೊಳಿಸುವ ಕ್ರಮವೆಂದು ತಿಳಿಯುತ್ತಿದ್ದರು. ಕೊಲೆ, ಕಳವು ಮತ್ತು ಹಲ್ಲೆ ಮುಂತಾದವು ಎರಡನೆಯ ಗುಂಪಿಗೆ ಸೇರುತ್ತಿದ್ದುವು. ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಇಲ್ಲವೇ ಮುಯ್ಯಿಗೆ ಮುಯ್ಯಿ ಎಂಬ ವಾದವೂ ಇತ್ತು. ಕಾಲಕ್ರಮೇಣ ಅನೇಕ ಖಾಸಗಿ ಅಪರಾಧಗಳನ್ನೂ ಸಾರ್ವಜನಿಕ ಅಪರಾಧಗಳ ಪಟ್ಟಿಗೆ ಸೇರಿಸಬೇಕಾಯಿತು. ಆದರೂ ಜನ ತಮ್ಮ ವಿವಾದಗಳನ್ನು ತಾವೇ ಬಗೆಹರಿಸಿಕೊಳ್ಳಲು ಅಸಮರ್ಥರಾದಾಗ ಮಾತ್ರ ಸರ್ಕಾರ ಕೈ ಹಾಕುತ್ತಿತ್ತು. ಹಾಗೂ ಕೊಲೆಯಾದವನು ಯಾವುದಾದರೂ ಒಂದು ಪಂಗಡದ ಸದಸ್ಯನಾಗಿದ್ದಲ್ಲಿ ಆ ಪಂಗಡವೇ ತನ್ನ ಪ್ರತಿಷ್ಠೆಯನ್ನು ಕಾಯ್ದುಕೊಳ್ಳುವುದಕ್ಕೆ ಸೇಡುತೀರಿಸಿಕೊಳ್ಳುತ್ತಿತ್ತು. ಮುಂದೆ ಅಪರಾಧಗಳ ನಿರ್ಣಯಾಧಿಕಾರ ಸರ್ಕಾರ ಇಲ್ಲವೇ ರಾಜರಿಗೆ ಸೇರಿತು. ಮರಣದಂಡನೆಯ ಬಳಿಕೆ ಸಮಾಜಕಂಟಕರ ನಿರ್ಮೂಲನಕ್ಕಷ್ಟೇ ಅಲ್ಲದೆ ಉಳಿದವರು ಅಪರಾಧಗಳನ್ನೆಸಗಲು ಹಿಂಜರಿಯುವಂತೆ ಮಾಡುವುದಕ್ಕೂ ಆಗಿತ್ತು. ಬರುಬರುತ್ತ ಅದು ಅಪರಾಧಗಳನ್ನು ಹತ್ತಿಕ್ಕುವ ಉತ್ತಮ ಮಾರ್ಗವೆಂದಾಯಿತು. 18ನೆಯ ಶತಮಾನದಲ್ಲಿ 19ರ ಆದಿಯಲ್ಲಿ ಇಂಗ್ಲೆಂಡಿನಲ್ಲಿ ಹೆಚ್ಚಾಗಿ ಮರಣದಂಡನೆಯನ್ನು ವಿಧಿಸಲಾಗುತ್ತಿತ್ತು. 1714 ಮತ್ತು 1830ರ ನಡುವೆ ಸುಮಾರು 156 ಅಪರಾಧಗಳನ್ನು ಮರಣದಂಡನಾರ್ಹ ಅಪರಾಧಗಳ ಪಟ್ಟಿಯಲ್ಲಿ ಸೇರಿಸಲಾಯಿತು. ಇದರಿಂದ ಮರಣದಂಡನಾರ್ಹ ಸಂಖ್ಯೆ 220ಕ್ಕೆ ಏರಿತು. ಮುಂದೆ 19ನೆಯ ಶತಮಾನದ ಉತ್ತರಾರ್ಧದಲ್ಲಿ ಮರಣದಂಡನಾರ್ಹ ಅಪರಾಧಗಳ ಸಂಖ್ಯೆ ಇಳಿಮುಖವಾಯಿತು. ಅನೇಕ ದೇಶಗಳು ಮರಣದಂಡನೆ ವಿಧಿಸುವುದನ್ನೇ ನಿಲ್ಲಿಸಿದುವು. ಮಾಂಟಿಸ್ಕ್ಯೊ, ವಾಲ್ಟೇರ್ ಮತ್ತು ಬೆಕಾರೀಯ ಮೊದಲಾದವರ ವಿಚಾರಶೀಲ ಬರಹಗಳು, ಕೈಗಾರಿಕಾ ಕೆಲಸಗಾರರ ಪ್ರಭಾವ ಹಾಗೂ ಮಾನವೀಯತೆಯ ಆಂದೋಲನಗಳು ಮರಣದಂಡನೆಯನ್ನು ಸಡಿಲಗೊಳಿಸುವ ವಿಚಾರಗಳು ಮೂಡುವುದಕ್ಕೆ ಕಾರಣವಾದುವು. ಬೆಕಾರೀಯನಿಂದ ಪ್ರಭಾವಿತನಾಗಿದ್ದ ಇಂಗ್ಲೆಂಡಿನ ಬೆಂಟ್ ಹ್ಯಾಮ್ 1764ರಲ್ಲಿ ಪ್ರಕಟಿಸಿದ ಟ್ರಿಟೀಸ್ ಆನ್ ಕ್ರೈಮ್ಸ್ ಅಂಡ್ ಪನಿಶ್‍ಮೆಂಟ್ ಗ್ರಂಥದಲ್ಲಿ ಅಪರಾಧಿಗೆ ನೀಡಲಾಗುವ ಶಿಕ್ಷೆ ಅವನು ತನ್ನ ಕೃತ್ಯದಿಂದ ಗಳಿಸಿದ ಅನುಕೂಲ ಅಥವಾ ಲಾಭವನ್ನು ಮೀರಬಾರದೆಂದೂ ಕೊಲೆ ಮತ್ತು ರಾಜದ್ರೋಹಗಳಿಗೆ ಮಾತ್ರ ಮರಣದಂಡನೆ ಸೀಮಿತವಾಗಬೇಕೆಂದೂ ವಾದಿಸಿದ. 1810ರಲ್ಲಿ ಸ್ಯಾಮ್ಯುಯಲ್ ರೋಮಿಲ್ಲಿ 5 ಷಿಲ್ಲಿಂಗ್ ಅಥವಾ ಅದಕ್ಕೂ ಹೆಚ್ಚನ್ನು ಕದಿಯುವವರಿಗೆ ವಿಧಿಸುತ್ತಿದ್ದ ಮರಣದಂಡನೆಯನ್ನು ರದ್ದುಗೊಳಿಸಬೇಕೆಂದು ಮಸೂದೆ ಮಂಡಿಸಿದ. ಈ ಬಗೆಯಲ್ಲಿ ಮರಣದಂಡನೆ ವಿರುದ್ಧ ಆಂದೋಲನ ಕಾರ್ಯರೂಪದಲ್ಲಿ ಆರಂಭವಾಯಿತು. ಮರಣದಂಡನೆ ಅಪರಾಧಗಳಿಂದ ಹಿಮ್ಮೆಟ್ಟಿಸುವ ಅತ್ಯಂತ ಪರಿಣಾಮಕಾರಿಯಾದ ಅಸ್ತ್ರವೆಂಬುದೇ ಆಗಿನ ಭಾವನೆಯಗಿತ್ತು. ಶ್ರೇಷ್ಠ ನ್ಯಾಯಾಧೀಶ ಎಲೆನ್‍ಬರೋ ಬ್ರಿಟನ್ನಿನ ಮೇಲ್ಮನೆಯಲ್ಲಿ ನ್ಯಾಯ ಮತ್ತು ಸಾರ್ವಜನಿಕ ಭದ್ರತೆಯ ದೃಷ್ಟಿಯಿಂದ ಮರಣದಂಡನೆ ತೆಗೆದುಹಾಕುವುದು ಸರಿಯಾದುದೆಂದು ವಾದಿಸಿದ. ಅನಂತರ ಲಂಡನ್ನಿನ ಸರಾಫರು ಕಳ್ಳರುಜುವಿಗೆ ಮರಣದಂಡನೆ ವಿಧಿಸುವುದನ್ನು ರದ್ದುಗೊಳಿಸಬೇಕೆಂದು ಮನವಿ ಸಲ್ಲಿಸಿದ್ದರು. ಮರಣದಂಡನೆಯನ್ನು ಸಹಿಸದ ಜ್ಯೂರಿ ಸದಸ್ಯರು ಕಳ್ಳರುಜುವಿನಂಥ ಅಪರಾಧಗಳಿಗೆ ಮರಣದಂಡನೆ ವಿಧಿಸುವುದನ್ನು ಒಪ್ಪದೆ ಸಾಕಷ್ಟು ಪುರಾವೆಯಿದ್ದಾಗ್ಗ್ಯೂ ಆಪಾದಿತರು ನಿರಪರಾಧಿಗಳೆಂದು ತೀರ್ಪು ನೀಡುತ್ತಿದ್ದುದೇ ಈ ಮನವಿಗೆ ಕಾರಣವಾಗಿತ್ತು. ಅಂದಿನಿಂದ ಇಂಗ್ಲೆಂಡಿನ ದಂಡವಿಧಿಯಲ್ಲಿ ಅನೇಕ ಬದಲಾವಣೆಗಳಾಗಿವೆ. ಸಾರ್ವಜನಿಕರ ಎದುರಿನಲ್ಲಿ ಗಲ್ಲಿಗೇರಿಸುವುದನ್ನು 1868ರಲ್ಲಿ ನಿಲ್ಲಿಸಲಾಯಿತು. ಮುಂದೆ 16 ವರ್ಷಕ್ಕಿಂತ ಕೆಳಗಿನವರಿಗೆ ಈ ಶಿಕ್ಷೆಯನ್ನು ವಿಧಿಸಬಾರದೆಂದಾಯಿತು (1908). 1932ರಲ್ಲಿ ವಯೋಮಿತಿಯನ್ನು 18ಕ್ಕೂ ಏರಿಸಲಾಯಿತು. ಶಿಶುಹತ್ಯಕ್ಕಾಗಿ ಹೆರಿಗೆಯ ಪರಿಣಾಮದಿಂದ ಇನ್ನೂ ಚೇತರಿಸಿಕೊಳ್ಳದಿದ್ದ ಸ್ತ್ರೀಯರಿಗೆ ಹಾಗೂ ಗರ್ಭಿಣಿಸ್ತ್ರೀಯರಿಗೆ ಮರಣದಂಡನೆ ವಿಧಿಸುವುದನ್ನು ಅನುಕ್ರಮವಾಗಿ 1922 ಮತ್ತು 1931ರಲ್ಲಿ ನಿಲ್ಲಿಸಲಾಯಿತು, ಕೊಲೆಗೆ ಮರಣದಂಡನೆ ವಿಧಿಸುವುದನ್ನು 1965ರಲ್ಲಿ ಪ್ರಾಯೋಗಿಕವಾಗಿ ಸ್ಥಗಿತಗೂಳಿಸಲಾಯಿತು. ಈಗ ಮರಣದಂಡನೆಯನ್ನು ರಾಜದ್ರೋಹ, ಮತ್ತೆ ಮತ್ತೆ ಮಾಡಿದ ಕೊಲೆಗಳು ಹಿಂಸಾಚಾರದಿಂದೊಡಗೂಡಿದ ಹಡಗುಗಳ್ಳತನ ಹಾಗೂ ರಾಜನೌಕೆಗಳಿಗೆ ಬೆಂಕಿಯಿಕ್ಕುವುದು ಮುಂತಾದ ಅಪರಾಧಗಳಿಗೆ ಮಾತ್ರ ವಿಧಿಸಲಾಗುತ್ತಿದೆ. ಸರ್ವಾಧಿಕಾರಿಶಾಹೀ ರಾಷ್ಟ್ರಗಳಲ್ಲಿ ವಿನಾಶಕಾರಿ ಮತ್ತು ದೇಶಕ್ಕೆ ಅಪಾಯಕಾರಕವೆಂದು ಎಣಿಸುವ ಕೃತ್ಯಗಳಿಗೆ ಮರಣದಂಡನೆ ವಿಧಿಸಲಾಗುತ್ತಿದೆ.

	ಅಮೆರಿಕಾ ಸ್ವಾತಂತ್ರ್ಯ ಯುದ್ಧ ಪೂರ್ವದಲ್ಲಿ ಅನೇಕ ಅಪರಾಧಗಳಿಗೆ ಅಲ್ಲಿ ಮರಣದಂಡನೆ ವಿಧಿಸಲಾಗುತ್ತಿತ್ತು. ಅನಂತರ ಹಲವಾರು ಬದಲಾವಣೆಗಳಾದುವು. 1788ರಲ್ಲಿ ಓಹಿಯೋ ರಾಜ್ಯ ಕೊಲೆಯನ್ನು ಮಾತ್ರ ಮರಣದಂಡನೀಯ ಅಪರಾಧವಾಗಿ ಪರಿಗಣಿಸಿತು. 1835ರಲ್ಲಿ ನ್ಯೂಯಾರ್ಕ್ ರಾಜ್ಯ ಸಾರ್ವಜನಿಕರ ಎದುರಿನಲ್ಲಿ ನೇಣು ಹಾಕುವುದನ್ನು ನಿರ್ಬಂಧಿಸಿತು. 1847ರಲ್ಲಿ ಮಿಚಿಗನ್ ಮರಣದಂಡನೆಯನ್ನೇ ನಿಲ್ಲಿಸಿತು. ಕಾನ್ಸಾಸ್ ಅದನ್ನು ಹಿಂಬಾಲಿಸಿತು. ಆರಿಜೋನ, ಕೊಲೊರಾಡೋ, ಅಯೇವಾ, ಮಿಸ್ಸೋರಿ, ಆರೆಗಾನ್ ಮತ್ತು ವಾಷಿಂಗ್‍ಟನ್ ರಾಜ್ಯಗಳು ಕೆಲಕಾಲ ಮರಣದಂಡನೆಯನ್ನು ನಿಲ್ಲಿಸಿ ಮತ್ತೆ ಅದನ್ನು ಜಾರಿಯಲ್ಲಿ ತಂದುವು. ಈಗ ಅನೇಕ ರಾಜ್ಯಗಳಲ್ಲಿ ಅದನ್ನು ನಿಲ್ಲಿಸಲಾಗಿದೆ. 1965ರಿಂದೀಚೆಗೆ ಅಮೆರಿಕದಲ್ಲಿ ಮರಣದಂಡನೆಯನ್ನು ವಿಧಿಸಿದ ಪ್ರಸಂಗಗಳು ವಿರಳ.

	ಮರಣದಂಡನೆಗೆ ಬಳಸಲಾಗುತ್ತಿದ್ದ ವಿಧಾನಗಳೂ ಬದಲಾಗುತ್ತಲೇ ಬಂದಿವೆ. ರೋಮಿನಲ್ಲಿ ಸಿಂಹ ಮತ್ತು ಸರ್ಪಗಳಿಗೆ, ಥಾಯ್ಲೆಂಡಿನಲ್ಲಿ ಮೊಸಳೆಗಳಿಗೆ ಅಪರಾಧಿಗಳನ್ನು ಒಗೆಯಲಾಗುತ್ತಿತ್ತು. ಯೆಹೂದಿಗಳು ಕಲ್ಲೊಗೆದು, ಅಥೆನಿಯನ್ನರು ವಿಷವಿಕ್ಕಿ, ಪರ್ಷಿಯನ್ನರು ಉರಿಯುತ್ತಿರುವ ಪಂಜುಗಳಿಂದ ಸುಟ್ಟು ಸಾಯಿಸುತ್ತಿದ್ದರು. ರೋಮಿನಲ್ಲಿ ಕಳವು ಮಾಡಿದ ಗುಲಾಮರನ್ನು ಗುಡ್ಡದ ತುದಿಯಿಂದ ಕಂದರಕ್ಕೆ ತಳ್ಳುತ್ತಿದ್ದರು. ಶಿಲುಬೆಗೇರಿಸುವುದೂ ರೋಮಿನಲ್ಲಿ ಜಾರಿಯಲ್ಲಿತ್ತು. ಚರ್ಮ ಸುಲಿಸುವುದು. ಶೂಲಕ್ಕೇರಿಸುವುದು, ಪ್ರಾಚೀನಪೂರ್ವದ ಹಾಗೂ ಮಧ್ಯಯುಗದ ಯೂರೋಪಿನ ವಿಧಾನಗಳಾಗಿದ್ದುವು. ಕುದುರೆಗಳಿಂದ ಜಗ್ಗಿಸಿ ಇಲ್ಲವೇ ಸಿಕ್ಕಿಸುವುದು. ಓಡುವ ರಥಕ್ಕೆ ಕಟ್ಟುವುದು, ಕುದಿಯುವ ನೀರಿನಲ್ಲಿ ಇಲ್ಲವೇ ಎಣ್ಣೆಯಲ್ಲಿ ಮುಳುಗಿಸುವುದು ಇತರ ವಿಧಾನಗಳಾಗಿದ್ದುವು. 19ನೆಯ ಶತಮಾನದ ತನಕ ಶಿಲುಬೆಗೇರಿಸುವುದು ಜಾರಿಯಲ್ಲಿತ್ತು. ಮಧ್ಯಯುಗದ ಯೂರೋಪಿನಲ್ಲಿ ಸಾಮಾನ್ಯರನ್ನು ನೇಣುಹಾಕಿ ಮೇಲು ವರ್ಗದವರನ್ನು ತಲೆಕಡಿದು ಸಾಯಿಸುತ್ತಿದ್ದರು. ಅನೇಕ ಸಲ ಸಾಯಿಸುವುದಕ್ಕೆ ಮೊದಲು ಚಿತ್ರಹಿಂಸೆಗೆ ಗುರಿಪಡಿಸುತ್ತಿದ್ದರು. ಗಿಲೊಟಿನ್ನಿನ ಶೋಧವಾದಾಗ ತಲೆ ಕಡಿಸಿಕೊಳ್ಳುವುದು ಕಳಂಕಪ್ರಾಯವಾಯಿತು. ಇಂಗ್ಲೆಂಡಿನಲ್ಲಿ ಅಪರಾಧಿಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಅನೇಕ ದಿನಗಳ ತನಕ ನೇಣಿಗೆ ತೂಗು ಹಾಕುತ್ತಿದ್ದರು. ಇದರಿಂದ ಉಳಿದವರು ಕಾಯಿದೆಯನ್ನು ಉಲ್ಲಂಘಿಸುವುದಕ್ಕೆ ಹಿಂಜರಿಯುವರೆಂಬ ವಿಚಾರವಿತ್ತು. ಗಿಲೊಟಿನ್ನಿನಿಂದ ಕಡಿಯುವುದು, ನೇಣು ಹಾಕುವುದು. ಕುತ್ತಿಗೆ ಹಿಚುಕುವುದು, ಗುಂಡಿಕ್ಕುವುದು, ವಿದ್ಯುತ್ತು ಹರಿಯುತ್ತಿರುವ ಕುರ್ಚಿಯಲ್ಲಿ ಕುಳ್ಳಿರಿಸುವುದು, ವಿಷಪೂರಿತ ಹವೆಯನ್ನು ಸೇವಿಸುವಂತೆ ಮಾಡುವುದು ಮೊದಲಾದ ಮರಣದಂಡನೆಯ ವಿಧಾನಗಳು ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಬಳಕೆಯಲ್ಲಿವೆ. 

	ಮುಂದೆ ಮರಣದಂಡನೆ ಕುರಿತಾಗಿ ಸರ್ಕಾರಕ್ಕೆ ಪ್ರಜೆಯ ಜೀವವನ್ನು ತೆಗೆದುಕೊಳ್ಳುವುದಕ್ಕೆ ಅಧಿಕಾರವಿದೆಯೇ ಎಂಬ ಮೂಲ ಪ್ರಶ್ನೆ ವಾದವಿವಾದಗಳಿಗೆ ಎಡೆಕೊಟ್ಟಿತ್ತು. ಈ ಪ್ರಶ್ನೆಯ ವಿಷಯದಲ್ಲಿ ನೀತಿಬೋಧಕರು ಮತ್ತು ನ್ಯಾಯಶಾಸ್ತ್ರಜ್ಞರು ಒಮ್ಮತಕ್ಕೆ ಬರುವುದು ಸಾಧ್ಯವಿಲ್ಲ. ಸುಧಾರಕರು ಮರಣದಂಡನೆ ಜೀವಕ್ಕೆ ಜೀವ ತೆಗೆದುಕೊಂಡು ಸೇಡು ತೀರಿಸಿಕೊಳ್ಳುವುದು ಭೂತಕಾಲದ ಅಸಂಸ್ಕøತ ಅವಶೇಷವೆಂದು ಹೇಳುತ್ತಾರಾದರೆ ಆಡಳಿತಗಾರರ ಮತ್ತು ಮರಣದಂಡನೆಯ ಸಮರ್ಥಕರ ಪ್ರಕಾರ ಮರಣದಂಡನೆ ಮಾನವ ಹೀನ ಅಪರಾಧಗಳನ್ನು ಮಾಡದಂತೆ ತಡೆಯುತ್ತದೆ; ಅಧಿಕಾರವರ್ಗಕ್ಕೆ ದೇಶದಲ್ಲಿ ನ್ಯಾಯ ಮತ್ತು ಶಿಸ್ತನ್ನು ಕಾಪಾಡುವುದಕ್ಕೆ ಸಹಾಯವಾಗುತ್ತದೆ ಮತ್ತು ಮಾನವಜೀವದ ಬಗೆಗೆ ಗೌರವ ಹೆಚ್ಚಿಸಿ, ಸಮಾಜವನ್ನು ನಿಷ್ಕಂಟಕವಾಗಿ ಮಾಡುತ್ತದೆ ಎಂದಿದೆ. ಅಲ್ಲದೇ ಮರಣದಂಡನೆ ಅಪರಾಧ ನಿರೋಧಕ, ಕೊಲೆ ಅತ್ಯಂತ ಘೋರ ಅಪರಾಧವಾಗಿರುವುದರಿಂದ ಅದಕ್ಕೆ ಪ್ರತೀಕಾರ ಮತ್ತು ದ್ವೇಷ ಸಾಧಿಸಿಕೊಳ್ಳುವ ಒಂದು ಸಾಧನವಾಗಿ ಮರಣದಂಡನೆ ಅವಶ್ಯ; ಕ್ಷಮೆ ನೀಡುವ ಅಧಿಕಾರದಿಂದಾಗಿ ಬೇರೆ ಶಿಕ್ಷೆ ವಿಧಿಸಿ ಅಪರಾಧಿ ಕೆಲವೇ ದಿನಗಳಲ್ಲಿ ಬಿಡುಗಡೆ ಹೊಂದಿ ಮತ್ತೆ ಸಮಾಜಕಂಟಕನಾಗುವುದು ಖಾತ್ರಿ; ರೊಚ್ಚಿಗೆದ್ದ ಜನತೆ ತಾವೇ ನ್ಯಾಯ ನೀಡುವುದಾಗಿ ಅಪರಾಧಿಯನ್ನು ಯೋಗ್ಯವಿಚಾರಣೆಯಿಲ್ಲದೆ ಸಾಯಿಸುವ ಸಂಭವವನ್ನು ನಿಲ್ಲಿಸಲು ಮರಣದಂಡನೆಯೊಂದೇ ಸರಿಯಾದ ಹಾದಿ; ಮರಣದಂಡನೆ ವಿಧಿಸುವುದರಿಂದ ರಾಜ್ಯದ ಬೊಕ್ಕಸಕ್ಕೆ ಖರ್ಚು ಕಡಿಮೆ ಆಗುತ್ತದೆ; ಏಕೆಂದರೆ ಅಪರಾಧಿಗಳನ್ನು ಜೀವಾವಧಿ ಸೆರೆಮನೆಯಲ್ಲಿಡುವುದು ಗಮನಾರ್ಹ ಖರ್ಚಿನ ಬಾಬ್ತು; ಅಪರಾಧವೆಸಗುವುದು ಕೀಳು ಪ್ರವೃತ್ತಿಯ ಸೂಚಕವಾಗಿದ್ದು ಅದರ ಮೂಲ ಜೀವಶಾಸ್ತ್ರಕ್ಕೆ ಸಂಬಂಧಿಸಿದ್ದಾದ್ದರಿಂದ ಮರಣದಂಡನೆಯಿಂದ ಜೀವಿಸಲು ಅರ್ನಹರಾದವರನ್ನು ನಿರ್ಮೂಲನ ಮಾಡಿದಂತಾಗುವುದು-ಇವೇ ಮುಂತಾದವು ಮರಣದಂಡನೆಯ ಸಮರ್ಥಕರು ಹೇಳುವ ವಿಚಾರಗಳು. ಇದಕ್ಕೆ ವಿರುದ್ಧವಾಗಿ ಪಳಗಿದ ಅಪರಾಧಿಗೆ ತನ್ನ ಪತ್ತೆಯಾಗದಂತೆ ನೋಡಿಕೊಳ್ಳಬಲ್ಲೆನೆಂಬ ಆತ್ಮವಿಶ್ವಾಸವಿರುವುದರಿಂದ ಅವನು ಅಪರಾಧಗೈಯ್ಯುವುದಕ್ಕೆ ಹಿಂಜರಿಯುವುದಿಲ್ಲ; ಮರಣದಂಡನೆ ಅನೇಕರಿಗೆ ಅಸಹ್ಯವಾಗುವುದರಿಂದ ಸಮರ್ಥ ಜೂರಿ ಸದಸ್ಯರು ದೊರಕುವುದು ಕಷ್ಟ; ಮರಣದಂಡನೆಯನ್ನು ಒಪ್ಪದ ಜೂರಿ ಸದಸ್ಯರು ಅಪರಾಧಿಗಳನ್ನು ಬಿಟ್ಟು ಬಿಡುವ ಸಂಭವ ಹೆಚ್ಚು. ಜೀವಾವಧಿ ಶಿಕ್ಷೆಯಾದರೆ ಅದನ್ನು ನೀಡಲು ಅವರಿಗೆ ಅಡ್ಡಿಯಿರಲಾರದು, ಮರಣದಂಡನೆ ಹಿಂಸಾವೃತ್ತಿಯನ್ನು ಪ್ರಚೋದಿಸುತ್ತದೆ; ಮರಣದಂಡನೆಯ ನಿರ್ಣಯ ಕಷ್ಟಸಾಧ್ಯ; ಮೇಲ್ಮನವಿ, ಮರುವಿಚಾರ ಮುಂತಾದವನ್ನು ಸಾಧಿಸಲಾಗದ ಬಡವರೇ ಅದಕ್ಕೆ ಬಲಿಯಾಗುತ್ತಾರೆ; ಸಮಾಜ ಅಪರಾಧದ ಮೂಲಕಾರಣಗಳನ್ನು ಪರಿಶೀಲಿಸುವುದು ಅಗತ್ಯ; ಅವನತಿ ಹೊಂದುತ್ತಿರುವ ಪರಿಸರವೇ ಅಪರಾಧಕ್ಕೆ ಮೂಲ; ಅಪರಾಧಿಯ ದುರ್ದೆಶೆಗೆ ಸಮಾಜದ ಹೊಣೆ ಕೆಲಮಟ್ಟಿಗಾದರೂ ಇರುತ್ತದೆ; ಆದ್ದರಿಂದ ಅವನ ಜೀವವನ್ನು ತೆಗೆದುಕೊಳ್ಳುವುದು ನ್ಯಾಯದ ದೃಷ್ಟಿಯಲ್ಲಿ ಸರಿಯಾಗದು; ಇಂದು ಅಪರಾಧಿಯ ಪುನರ್ವಸತಿ ಸಾಧ್ಯವಿದೆ, ಮರಣದಂಡನೆ ಪ್ರಾರಂಭವಾದದ್ದು ಇಂದಿನ ಸುಧಾರಿತ ಸೆರೆಮನೆಗಳು ಇಲ್ಲದಿದ್ದ ಕಾಲದಲ್ಲಿ. ಇಂದು ಅಪರಾಧಿಯನ್ನು ಸುಧಾರಿಸಿ ಸಮಾಜಯೋಗ್ಯನನ್ನಾಗಿ ಮಾಡುವುದು ಸಾಧ್ಯವಿದೆ; ಮರಣದಂಡನೆಗೆ ಬಲಿಯಾದಲ್ಲಿ ಅನ್ಯಾಯವಾಗಿ ಒಬ್ಬನ ಜೀವಹರಣ ಮಾಡಿದಂತಾಗುತ್ತದೆ; ಅದೇ ಅವನು ಜೀವಂತವಿದ್ದರೆ ಅವನನ್ನು ಮುಕ್ತಗೊಳಿಸಿ ಆದ ಅನ್ಯಾಯವನ್ನು ಸರಿಪಡಿಸುವುದು ಸಾಧ್ಯವಾಗುತ್ತದೆ-ಇವೇ ಮುಂತಾದವು ಮರಣದಂಡನೆಯನ್ನು ವಿರೋಧಿಸುವವರು ಹೇಳುವ ಮಾತು.

	ಭಾರತ ದಂಡ ಸಂಹಿತೆಯ ಪ್ರಕಾರ ಭಾರತ ಸರ್ಕಾರದ ವಿರುದ್ಧ ಯುದ್ಧ ಹೂಡುವುದು ಇಲ್ಲವೇ ಯುದ್ಧ ಹೂಡಲು ಯತ್ನಿಸುವುದು; ಸೈನ್ಯ, ಹಡಗು ಇಲ್ಲವೇ ವಾಯುದಳದ ಅಧಿಕಾರಿ, ಸಿಪಾಯಿ ಅಥವಾ ನಾವಿಕ ಇಲ್ಲವೇ ವಾಯುಸೈನಿಕರು ಬಂಡಾಯ ಹೂಡುವಂತೆ ಪ್ರಚೋದಿಸಿ ಆ ಪ್ರಚೋದನೆಯಿಂದಾಗಿ ಬಂಡಾಯಕ್ಕೆ ಕಾರಣವಾಗುವುದು; ಸುಳ್ಳುಸಾಕ್ಷ್ಯ ನೀಡುವುದರ ಮೂಲಕ ಒಬ್ಬ ನಿರಪರಾಧಿಯ ಮರಣಕ್ಕೆ ಕಾರಣವಾಗುವುದು; ಕೊಲೆ, ಅಪ್ರಾಯಸ್ಥ, ಹುಚ್ಚು ಹಿಡಿದ ಇಲ್ಲವೇ ಅಮಲಿನಲ್ಲಿದ್ದ ವ್ಯಕ್ತಿಯನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸುವುದು; ಕೊಲೆಯಿಂದೊಡಗೂಡಿದ ಡಕಾಯಿತಿ ಮತ್ತು ಆಜೀವ ಕಾರಾವಾಸವನ್ನನುಭವಿಸುತ್ತಿರುವ ಅಪರಾಧಿ ಕೊಲೆ ಮಾಡಲೆತ್ನಿಸಿ ಆ ಮೂಲಕ ನೋವನ್ನುಂಟುಮಾಡುವುದು-ಈ ಬಗೆಯ ಅಪರಾಧಗಳಿಗೆ ನ್ಯಾಯಾಲಯ ಮರಣದಂಡನೆ ವಿಧಿಸುವುದು ಅನಿವಾರ್ಯವಾಗುತ್ತದೆ. ಉಳಿದ ಸಂದರ್ಭಗಳಲ್ಲಿ ಮರಣದಂಡನೆಗೆ ಬದಲಾಗಿ ಅಪರಾಧಿಗೆ 10ವರ್ಷಗಳ ಇಲ್ಲವೇ ಜೀವಾವಧಿ ಶಿಕ್ಷೆ ಮತ್ತು ಜುಲ್ಮಾನೆ ವಿಧಿಸುವ ಅಧಿಕಾರ ನ್ಯಾಯಾಲಯಗಳಿಗಿರುತ್ತದೆ. ಸಂಹಿತೆಯ ಕರ್ತೃಗಳು ಮರಣದಂಡನೆಯನ್ನು ಬಲು ಎಚ್ಚರಿಕೆಯಿಂದ ಬಳಸಬೇಕೆಂದು ಹೇಳಿದ್ದಾರೆ. ವ್ಯಕ್ತಿಯ ಜೀವ ಅಮೂಲ್ಯವಾದದ್ದು. ಒಬ್ಬ ನಿರಪರಾಧಿ ನ್ಯಾಯದ ಹೆಸರಲ್ಲಿ ಸಾಯುವುದಕ್ಕಿಂತಲೂ ಅನೇಕ ಅಪರಾಧಿಗಳು ಶಿಕ್ಷೆಯಿಲ್ಲದೆ ಪಾರಾಗುವುದು ವಿಹಿತ ಎಂಬ ತತ್ತ್ವ ಈ ಎಚ್ಚರಿಕೆಯ ಹಿಂದೆ ಅಡಗಿದೆ. ಸೆಷನ್ಸ್ ನ್ಯಾಯಾಧೀಶರಿಗೆ ಮರಣದಂಡನೆ ನೀಡುವ ಅಧಿಕಾರವಿರುತ್ತದೆ. ಮರಣದಂಡನೆ ವಿಧಿಸಿದ ನ್ಯಾಯಾಧೀಶರು ಅಪರಾಧಿ ತನ್ನ ಪರವಾಗಿ ಮತ್ತೆ ಪರಿಶೀಲನೆಗೆ ಅರ್ಜಿ ಸಲ್ಲಿಸಲು ಬಯಸಿದಲ್ಲಿ ಇಂತಿಷ್ಟು ಅವಧಿಯೊಳಗೆ ಸಲ್ಲಿಸಬೇಕೆಂಬುದನ್ನು ತಿಳಿಸುವುದು ಅವಶ್ಯ. ಮರಣದಂಡನೆಯ ಶಿಕ್ಷೆ ಜಾರಿಯಲ್ಲಿ ಬರಬೇಕಾದರೆ ಉಚ್ಚನ್ಯಾಯಲಯ ಶಿಕ್ಷೆಯನ್ನು ಸ್ಥಿರೀಕರಿಸಬೇಕು. ಮರಣದಂಡನೆಗೀಡಾಗಿದ್ದ ವ್ಯಕ್ತಿ ಗರ್ಭಿಣಿ ಸ್ತ್ರೀಯಾಗಿದ್ದಲ್ಲಿ ಉಚ್ಚ ನ್ಯಾಯಲಯ ಶಿಕ್ಷೆ ಜಾರಿಯನ್ನು ಮುಂದೆ ಹಾಕಬೇಕಾಗುತ್ತದೆ. ಹಾಗೂ ಅದು ತನಗೆ ಉಚಿತ ತೋರಿದಲ್ಲಿ ಶಿಕ್ಷೆಯನ್ನು ಅಜೀವ ಕಾರಾಗೃಹವಾಸಕ್ಕೆ ಪರಿವರ್ತಿಸಬಹುದು. ಸಂಹಿತೆಯ 54ನೆಯ ಕಾಲಮಿನ ಪ್ರಕಾರ ಸರ್ಕಾರ ಅಪರಾಧಿಯ ಮರಣದಂಡನೆಯನ್ನು ಸಂಹಿತೆಯಲ್ಲಿ ಹೇಳಲಾಗಿರುವ ಬೇರೆಬಗೆಯ ಶಿಕ್ಷೆಗೆ ಪರಿವರ್ತಿಸಬಹುದು. ಮರಣದಂಡನೆಯ ಆಜ್ಞೆಯಲ್ಲಿ ಜೀವಹೋಗುವ ತನಕ ಅಪರಾಧಿಯ ಕುತ್ತಿಗೆಗೆ ನೇಣನ್ನು ಹಾಕಿರಬೇಕು ಎಂಬ ನಿರ್ದೇಶವಿರಬೇಕಾಗುತ್ತದೆ. 

	ಮರಣದಂಡನೆ ಒಂದು ಶಿಕ್ಷೆಯಾಗಿ ಮುಂದುವರಿಯಬೇಕೇ ಬೇಡವೇ ಎಂಬುದರ ಬಗೆಗೆ ಭಾರತದಲ್ಲಿಯೂ ಭಿನ್ನಾಭಿಪ್ರಾಯಗಳಿವೆ. ಸರ್ಕಾರ, ಭಾರತದಂಡಸಂಹಿತೆಯನ್ನು ತಿದ್ದುಪಡಿಮಾಡಿ ಹೆಚ್ಚಿನ ಅಪರಾಧಗಳಿಗೆ ಮರಣದಂಡನೆಯ ಬದಲಿಗೆ ಆಜೀವ ಕಾರಾವಾಸವನ್ನೇ ವಿಧಿಸಬೇಕು ಮತ್ತು ಮರಣದಂಡನೆಯನ್ನು ಕೇವಲ ಅಸಾಧಾರಣ ಪ್ರಕರಣಗಳಿಗೆ ಮೀಸಲಾಗಿಡಬೇಕು ಎಂಬ ಭಾವನೆಯಿದೆ. ಬ್ರಿಟಿಷರ ಕಾಲದಲ್ಲಿ ಜಯಪುರ ಮುಂತಾದ ದೇಶೀ ಸಂಸ್ಥಾನಗಳಲ್ಲಿ ಮರಣದಂಡನೆಯನ್ನು ವಿಧಿಸುತ್ತಿರಲಿಲ್ಲ. ಆದರೂ ಉಳಿದೆಡೆಗಳಿಗಿಂತ ಅಲ್ಲಿ ಕೊಲೆ ಪ್ರಕರಣಗಳು ಅಧಿಕವಾಗಿರಲಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ಮರಣದಂಡನೆ ವಿಧಿಸಿದ ಪ್ರಸಂಗಗಳು ಕಡಿಮೆ ಆದರೂ ಕೊಲೆ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಬದಲಾವಣೆಯೇನೂ ಆಗಿಲ್ಲ. ಒಂದು ಕಾಲದಲ್ಲಿ ಪಂಜಾಬ್ ಕೊಲೆ ಪ್ರಕರಣಗಳ ಸಂಖ್ಯಾ ದೃಷ್ಟಿಯಿಂದ ಉಳಿದೆಲ್ಲ ರಾಜ್ಯಗಳಿಗಿಂತ ಮುಂದಿತ್ತು. ಇಂದು ಆ ಪರಿಸ್ಥಿತಿ ಉಳಿದಿಲ್ಲ. 

	ಆಮ್ನೆಸ್ಟಿ ಇಂಟರ್‍ನ್ಯಾಷನಲ್ ಆಶ್ರಯದಲ್ಲಿ ಡಿಸೆಂಬರ್ 1977ರಲ್ಲಿ ಸೇರಿದ ಸ್ಟಾಕ್ ಹೋಮ್ ಸಮ್ಮೇಳನ ಪ್ರಪಂಚಾದ್ಯಂತ ಮರಣದಂಡನೆಯನ್ನು ರದ್ದುಗೊಳಿಸಬೇಕೆಂಬುದರ ಪರ ಅಭಿಪ್ರಾಯಗಳು ಹೆಚ್ಚುತ್ತಿವೆಯೆಂಬುದನ್ನು ಸಾಬೀತುಮಾಡಿತು. ಸರ್ಕಾರ ಪ್ರಜೆಯೊಬ್ಬನ ಜೀವಹರಣ ಮಾಡುವ ವಿಚಾರವೇ ಇಂದು ಎಲ್ಲ ಸುಸಂಸ್ಕøತ ಜನರಿಗೆ ಹಿಡಿಸದಾಗಿದೆ. ದಾರಿದ್ರ್ಯ ಕಾರಣ ಕೊಲೆ ಹಗುರವಾಗಿ ಕಾಣುವಂತೆ ಆಗಿದೆ ಎಂಬ ವಾದದಲ್ಲಿ ತಥ್ಯಾಂಶವಿಲ್ಲ. ಮರಣದಂಡನೆಯನ್ನು ಪ್ರಪಂಚವಿಡೀ ಪೂರ್ಣವಾಗಿ ನಿಷೇಧಿಸುವ ಕಾಲ ನಿರೀಕ್ಷಣೆಯಲ್ಲಿದೆ.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ